ಕಾಡು ಮೈನ

 ಆಕ್ರಿಡೋಥೀರಸ್ ಫಸ್ಕಸ್ ಎಂಬ ವೈಜ್ಞಾನಿಕ ಹೆಸರಿನ ಹಕ್ಕಿ. ಭಾರತದಲ್ಲಿ ಕರ್ನಾಟಕ, ಕೇರಳ, ಪಶ್ಚಿಮ ಘಟ್ಟಗಳು, ಉತ್ತರ ಗುಜರಾತ್, ನೀಲಗಿರಿ, ಪಳನಿ ಬೆಟ್ಟಗಳು, ಅಸ್ಸಾಮ್ ಮತ್ತು ಹಿಮಾಲಯದ 7000' ಎತ್ತರದ ಪ್ರದೇಶಗಳ ಕಾಡುಗಳಲ್ಲಿ ಹೇರಳವಾಗಿ ಕಾಣಬರುತ್ತವೆ. ಇದು ಗಾತ್ರದಲ್ಲೂ ದೇಹದ ಹಲವಾರು ಲಕ್ಷಣಗಳಲ್ಲೂ ಮೈನವನ್ನೇ ಹೋಲುತ್ತದೆ. ಆದರೆ ಇದರ ದೇಹದ ಬಣ್ಣ ಬೂದಿಮಿಶ್ರಿತ ಕಂದು, ಕೇಸರಿ ಬಣ್ಣದ ಕಾಲುಗಳು ಮತ್ತು ಕೊಕ್ಕನ್ನು ಹೊಂದಿರುತ್ತವೆ. ಕಣ್ಣಿನ ಸುತ್ತ ಹಳದಿ ಬಣ್ಣದ ಚರ್ಮ ಇಲ್ಲ; ತಲೆಯ ಮೇಲೆ ಪೊದೆಯಂಥ ಶಿಖೆ ಇದೆ ಈ ಕಾರಣಗಳಿಂದ ಇದು ಮೈನ ಹಕ್ಕಿಯಿಂದ ಭಿನ್ನವಾಗಿದೆ. ಸಾಮಾನ್ಯವಾಗಿ ಜೋಡಿಗಳಲ್ಲಿಯೋ ಗುಂಪುಗಳಲ್ಲಿಯೋ ವಾಸಿಸುವುವು. ಸರ್ವಭಕ್ಷಕ. ಹಲವಾರು ಬಗೆಯ ಕೀಟಗಳು, ಮಿಡತೆಗಳು, ಕಪ್ಪೆ, ಹಣ್ಣು, ಕಾಯಿ, ಹೂವಿನ ಮಕರಂದ ಮುಂತಾದವು ಇದಕ್ಕೆ ಬಲು ಇಷ್ಟವಾದ ಆಹಾರ. ದನಗಳು ಹುಲ್ಲು ಮೇಯುತ್ತ ಹೋಗುವಾಗ ಹಾರುವ ಕೀಟಗಳನ್ನು ಹಿಡಿದು ತಿನ್ನುತ್ತವೆ. ಮೈನ ಹಕ್ಕಿಯಂತೆಯೇ ಕೂಗುವುದುಂಟು. ಫೆಬ್ರವರಿ-ಜುಲೈ ತಿಂಗಳುಗಳ ಸುಮಾರಿನಲ್ಲಿ ಗೂಡು ಕಟ್ಟುತ್ತದೆ. ಗೂಡನ್ನು ಪ್ರತ್ಯೇಕವಾಗೇನೂ ಕಟ್ಟುವುದಿಲ್ಲ. ಮರಕುಟುಕ, ಸೊಪ್ಪುಕುಟಿರ ಇವೇ ಮುಂತಾದ ಮರದಲ್ಲಿ ರಂಧ್ರ ಕೊರೆದು ಗೂಡು ಮಾಡುವ ಹಕ್ಕಿಗಳ ಗೂಡನ್ನು ಅವು ತೊರೆದ ನಂತರ ಹುಲ್ಲು, ಸೊಪ್ಪುಗಳನ್ನು ತುಂಬಿ ಬಳಸಿಕೊಳ್ಳುತ್ತವೆ. ಆದ್ದರಿಂದ ಇವು ದ್ವಿತೀಯ ಹಂತದ ಬಳಕೆದಾರರು. ಸಾಮಾನ್ಯವಾಗಿ 3-4 ಮಿರುಗುವ ನೀಲಿಬಣ್ಣದ ಮೊಟ್ಟೆಗಳನ್ನಿಡುತ್ತವೆ.

(ವಿ.ಕೆ.ವಿ.)

(ಪರಿಷ್ಕರಣೆ: ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ